Friday, 21 June 2024

ಕಳೆದು ಹೋದವಳು

ಕಳೆದು ಹೋಗಿದ್ದೆ ನಾನು ಬದುಕಿನಲ್ಲೆಲ್ಲೋ
ನಾನಾಗಿ ನನಗಾಗಿ ಬದುಕಲಿಲ್ಲ

ಯಾತನೆಗಳ ಕೂಪದಲ್ಲೆಲ್ಲೋ ತಂಪನೆಯ ಗಂಧ ಲೇಪ
ಉಸಿರುಗತ್ತಿಸುವ ಬದುಕಿನ ತಂಗಾಳಿಯ ಸ್ಪರ್ಶ ಲೇಪ
ಕುಡಿಯೊಡೆಯುವ ಕನಸುಗಳು ಮುರುಟಿ ಹೋಗುವ ಮನಸುಗಳು   
ಕಳೆದು ಹೋದ ನನ್ನಲ್ಲಿ ಹುದುಗಿ ಹೋಗಿತ್ತೆಲ್ಲ ಕನಸುಗಳು  

 ಗುರಿ ಯಾರದೋ ಹೆಜ್ಜೆ ನನ್ನದು 
ಸುಳಿಯ ಸೆಳೆತ ಹೋರಾಟ ನನ್ನದು 

ನಿಶ್ಶಬ್ಧವಾಗಿ ಬಿಕ್ಕುವ ಪದಗಳು ನನ್ನವು
ಹೆರವರ ಹಾದಿಯಲ್ಲಿ ನಗೆಯ ಮುಖವಾಡ ನನ್ನದು 
ಕಳೆದು ಹೋದವಳು ನಾನು ಹುಡುಕಲೇಕೆ
ಹತ್ತು ನೂರು ಸಾವಿರ ಲಕ್ಷ ಕೋಟಿ ಅಕ್ಷೋಹಿಣಿ ಹೆಣ್ಮನಗಳು ಕಾಣೆಯಾಗುವುದೇಕೆ 

ಕರ್ತವ್ಯ ದ ಕೂಗಿಗೋ ಹೆರವರ ಕೂಳಿನ ಹಂಗಿಗೋ 
ಹೆದರಿ ಓಗೊಟ್ಟು ತನ್ನದೇ ಕಾಲ ತಾನೇ ಮರೆಯುವುದೇಕೆ 

ಉಸುಕಿನೊಳಗೆ ಬೆಂದದ್ದು ಕಳೆದು ಹೋದ ನಾನು 
ಹರಿವ ಹೊಳೆ ನೀರ ಸೆಲೆ ಹುಡುಕುತ್ತಾ ಕಳೆದೇ ಹೋದೆ ನಾನು 
ವ್ಯರ್ಥ ಬದುಕು ಬೇಡದ ಪಾತ್ರ ನೀಸಲಾಗದೆ ಕಳೆದು ಹೋದ ನನ್ನ ಹುಡುಕುವುದೇನು ಬಿಟ್ಟು ಬಿಡು 
ಸಿಗಲಾರೆ ಕಳೆದು ಹೋದ ನಾನು 
-ವೃಂದ ಸಿ ಎಂ

Sunday, 28 April 2024

ಬಯಲು

 

ಬಯಲು

ಬಯಲಲ್ಲಿ ನಿಂತವಳು ನಾನು

ನೆರಳಲ್ಲಿ ನೀರಿಲ್ಲ ಬದುಕು ಬಟಾಬಯಲು

 

ಕೈ ಹಿಡಿವರಿಲ್ಲ ಕಾಯ್ವರೆನ್ನುವರಿಲ್ಲ

ಬದುಕಿದ್ದೇಕೆ? ಉತ್ತರಿಸುವರಿಲ್ಲ.

ಅವಲಂಬಿತರಿಗೆ ಕೈ ತುತ್ತು

ಉಣಿಸುತ್ತಾ ಹೋಗಬೇಕೆನ್ನುವ ಕಸರತ್ತು

ವಿಶಾಲ ಬಯಲಿನ ಕೊನೆ ಯಾರಿಗೆ ಗೊತ್ತು

 

ಥಟ್ಟನೆ ಬಯಲು ಕೊನೆಯಾಗಿ

ಮರಗಿಡ ಸೋನೆ ಮಳೆ ನನಗಾಸರೆಯಾಗಿ

ಉಳಿದ ನನ್ನವರು ತಂಪಾಗಿ ಸೊಂಪಾಗಿ

ಬೆಳೆಯಲಾಸರೆಯ ಹುಡುಕುತ್ತಾ ಬರಿದಾಗಿ

ಬಯಲಿಗೆ ಮರಳಿ ಹೋಗಲೇ ಕಾನನದಿ

ಮುಗಿದು ಹೋಗಲೇ ಅರಿವಾಗದೆ ನಿಂತಲ್ಲಿ ನಿಂತು.

ವೃಂದ.ಸಿ.ಎಂ