Tuesday, 15 April 2025

ಅಂಗಿ.

ಅಂಗಿ ಅಂಗಿ ನನ್ನಯ ಅಂಗಿ 
ಕೊಟ್ಟವರಾರು,, ನನ್ನಯ ತಂಗಿ.

ಹಸಿರು ಬಣ್ಣದ ಹೊಳೆಯುವ ಅಂಗಿ, ಹೃನ್ಮನ ಸೆಳೆಯುವ ಭಾವದ ಭಂಗಿ.
ವಾರದಲೈದು ದಿನಗಳು ಹಾಕಿ,
ಒಗೆಯುವೆನದನು ಯಂತ್ರಕೆ ಹಾಕಿ.

ಯಾವ ಇಜಾರಕು ಇದು ಸರಿಯೇ ಸೈ 
ಹೇಳೇನು ಎಂದಿಗೂ ಇದಕೆ  ಬೈ 

ಗೆಳೆಯರು ಅನುವರು ಇದೇ ತಾನೇ ನಿಮ್ಮಯ ಅಂಗಿ 
 
ಕೊಟ್ಟವರಲ್ಲವೇ ಮುದ್ದಿನ ತಂಗಿ.

Vrinda

Sunday, 6 April 2025

ಕೆಲವು ಮರೆಯಲಾಗದ ದಿನಗಳು

ಮರೆಯಲು ಸಾಧ್ಯವೇ ಇಲ್ಲದ ದಿನಗಳಲ್ಲಿ ಕಣ್ಣೀರಲ್ಲಿ ಕೆನ್ನೆ ತೋಯ್ದ ದಿನಗಳು ಅಚ್ಚಳಿಯದೆ ಏಕೆ ಉಳಿದಿವೆ?

ಬರಿಯ ಹರುಷದ ದಿನ ಕ್ಷಣ ಎಲ್ಲಿಗೋ  ಓಡಿ ಹೋಗಿರುತ್ತಾವೆ. ಹಿಡಿದಿಟ್ಟರೂ ಅಂಗೈಯ್ಲಿ ಮುಚ್ಚಿಟ್ಟರೂ ಚಡಪಡಿಸರೆಕ್ಕ್ಕೆಯಾಡಿಸಿ ಚಿಟ್ಟೆಯಂತೆ ಹಾರಿ ಹೋಗಿ ದುಗುಡವನ್ನೇ ಉಳಿಸುತ್ತವೆ.

ಗಂಟಲಲ್ಲ ಬೆಂಕಿಯ ಉಂಡೆ ಸಿಕ್ಕಿ ಕೊಂಡಂತೆ ಸುಡುತ್ತಾ, ಉರಿಯುತ್ತ ಜೀವ ಸೀಳಿ ಕಿತ್ತು ತಿನ್ನುತ್ತವೆ.. ತುಟಿಯ ಮೇಲಿನ ಕಿರುನಗೆಯ ಅಳಿಸಿ ಹಾಕಿ ಬೆಚ್ಚಗಿನ ಕಣ್ಣೀರ ಧಾರೆ ಹರಿಸುತ್ತವೆ..

Vrinda..

Thursday, 13 March 2025

ದಹನ

ಹೋಲಿಕೆ  ಸುಟ್ಟವಳೋ   ಸುಟ್ಟು ಹೋದವಳೋ ಉಳಿದದ್ದಂತು ಬರೀ ಬೂದಿ..
ಬೆಂಕಿಯ ಬಿಸಿ ಹಬೆ, ಹಸಿ ಮಾಂಸ ಸುಟ್ಟ ಕಮಟು ವಾಸನೆ, ಜೀವಕ್ಕೆ ಸಾವೇ ಆದರೂ ಈ ಪರಿ ನೋವೇಕೆ?

ತಪ್ಪು ಒಪ್ಪುಗಳ ನಡುವಿನ ವೈರುಧ್ಯಕ್ಕೆ ಬಲವಾದ ಒಳ ಸುಳಿ ಅಗೌರವ, ಅಸಹನೆ.
ಬಿಡದೆ ಸುಡುವ ತೀಕ್ಷಣ ನಂಜಿನಆಂಬು 
ನಂಜಿರದ ಬಾಳು ಕನ್ನಡಿಯ ಗಂಟೇಕೆ?

ಸುಡುವಿರೇಕೆ,  ಬಿಟ್ಟುಬಿಡಿ. ಆಸೆಯ, ಕನಸುಗಳ  ನಿರೀಕ್ಷೆ ಗಳ ಬೆಳೆಯ ಬಿಡಿ.
ಮನುಜರಲ್ಲವೇ ನಾವು?!

ಧಗೆಯೇಕೆ, ಬಿಸಿಲ ಬಾಯಾರಿಕೆಯೇಕೆ
ನೋಯಿಸಲೇಕೆ
ಪುಟ್ಟದೊಂದು ಮನವಿದೆ, ಧೂಮಕರಿ ಆಗದೆ ಅರಳಲು ಬಯಸುವದದು


ಸಲಿಲ ಧಾರೆ ಎರೆದು, ತಿಳಿ ಹಸಿರು 
ಎಲೆಗಳ ನಡುವೆ ಹೂ ಅರಳಲು ಬಿಡಿ ತಂಪು ನುಡಿ ತಂಪು ನೆಲ ದಾರಿ ತೋರಿ ನಡೆಸಿ,..
ವೃಂದ 

Friday, 21 June 2024

ಕಳೆದು ಹೋದವಳು

ಕಳೆದು ಹೋಗಿದ್ದೆ ನಾನು ಬದುಕಿನಲ್ಲೆಲ್ಲೋ
ನಾನಾಗಿ ನನಗಾಗಿ ಬದುಕಲಿಲ್ಲ

ಯಾತನೆಗಳ ಕೂಪದಲ್ಲೆಲ್ಲೋ ತಂಪನೆಯ ಗಂಧ ಲೇಪ
ಉಸಿರುಗತ್ತಿಸುವ ಬದುಕಿನ ತಂಗಾಳಿಯ ಸ್ಪರ್ಶ ಲೇಪ
ಕುಡಿಯೊಡೆಯುವ ಕನಸುಗಳು ಮುರುಟಿ ಹೋಗುವ ಮನಸುಗಳು   
ಕಳೆದು ಹೋದ ನನ್ನಲ್ಲಿ ಹುದುಗಿ ಹೋಗಿತ್ತೆಲ್ಲ ಕನಸುಗಳು  

 ಗುರಿ ಯಾರದೋ ಹೆಜ್ಜೆ ನನ್ನದು 
ಸುಳಿಯ ಸೆಳೆತ ಹೋರಾಟ ನನ್ನದು 

ನಿಶ್ಶಬ್ಧವಾಗಿ ಬಿಕ್ಕುವ ಪದಗಳು ನನ್ನವು
ಹೆರವರ ಹಾದಿಯಲ್ಲಿ ನಗೆಯ ಮುಖವಾಡ ನನ್ನದು 
ಕಳೆದು ಹೋದವಳು ನಾನು ಹುಡುಕಲೇಕೆ
ಹತ್ತು ನೂರು ಸಾವಿರ ಲಕ್ಷ ಕೋಟಿ ಅಕ್ಷೋಹಿಣಿ ಹೆಣ್ಮನಗಳು ಕಾಣೆಯಾಗುವುದೇಕೆ 

ಕರ್ತವ್ಯ ದ ಕೂಗಿಗೋ ಹೆರವರ ಕೂಳಿನ ಹಂಗಿಗೋ 
ಹೆದರಿ ಓಗೊಟ್ಟು ತನ್ನದೇ ಕಾಲ ತಾನೇ ಮರೆಯುವುದೇಕೆ 

ಉಸುಕಿನೊಳಗೆ ಬೆಂದದ್ದು ಕಳೆದು ಹೋದ ನಾನು 
ಹರಿವ ಹೊಳೆ ನೀರ ಸೆಲೆ ಹುಡುಕುತ್ತಾ ಕಳೆದೇ ಹೋದೆ ನಾನು 
ವ್ಯರ್ಥ ಬದುಕು ಬೇಡದ ಪಾತ್ರ ನೀಸಲಾಗದೆ ಕಳೆದು ಹೋದ ನನ್ನ ಹುಡುಕುವುದೇನು ಬಿಟ್ಟು ಬಿಡು 
ಸಿಗಲಾರೆ ಕಳೆದು ಹೋದ ನಾನು 
-ವೃಂದ ಸಿ ಎಂ

Sunday, 28 April 2024

ಬಯಲು

 

ಬಯಲು

ಬಯಲಲ್ಲಿ ನಿಂತವಳು ನಾನು

ನೆರಳಲ್ಲಿ ನೀರಿಲ್ಲ ಬದುಕು ಬಟಾಬಯಲು

 

ಕೈ ಹಿಡಿವರಿಲ್ಲ ಕಾಯ್ವರೆನ್ನುವರಿಲ್ಲ

ಬದುಕಿದ್ದೇಕೆ? ಉತ್ತರಿಸುವರಿಲ್ಲ.

ಅವಲಂಬಿತರಿಗೆ ಕೈ ತುತ್ತು

ಉಣಿಸುತ್ತಾ ಹೋಗಬೇಕೆನ್ನುವ ಕಸರತ್ತು

ವಿಶಾಲ ಬಯಲಿನ ಕೊನೆ ಯಾರಿಗೆ ಗೊತ್ತು

 

ಥಟ್ಟನೆ ಬಯಲು ಕೊನೆಯಾಗಿ

ಮರಗಿಡ ಸೋನೆ ಮಳೆ ನನಗಾಸರೆಯಾಗಿ

ಉಳಿದ ನನ್ನವರು ತಂಪಾಗಿ ಸೊಂಪಾಗಿ

ಬೆಳೆಯಲಾಸರೆಯ ಹುಡುಕುತ್ತಾ ಬರಿದಾಗಿ

ಬಯಲಿಗೆ ಮರಳಿ ಹೋಗಲೇ ಕಾನನದಿ

ಮುಗಿದು ಹೋಗಲೇ ಅರಿವಾಗದೆ ನಿಂತಲ್ಲಿ ನಿಂತು.

ವೃಂದ.ಸಿ.ಎಂ


Sunday, 5 March 2023

ಭಗವಂತನ ಮುಗುಳ್ನಗೆ

ಎಲ್ಲರ ಉದ್ಧರಿಪ ಪುರಂದರ ವಿಠ್ಠಲನೆ ಯಾಕೆ ಎನ್ನನು ಕಡೆಗಣಿಸಿದೆಯೋ? ದಾಸರ ಈ ಪ್ರಶ್ನೆಗೆ ಉತ್ತರ ಸಿಕ್ಕಿತೆ? ಗೊತ್ತಿಲ್ಲ. ಆದರೆ ಕೃಷ್ಣ ಭಗವಂತನ ಮುಖದಲ್ಲಿ ಮುಗುಳುನಗೆ ಕಾಣಿಸುತ್ತಿತ್ತು.
ವೃಂದ 

Friday, 13 June 2014

ಹಾರೈಕೆ

ಸಾಧನೆಯ ದಾರಿ ಬಲು ದೂರ, ನಿರಂತರ.
ಗೆಲುವಿನೊಂದೊಂದು ಮೈಲುಗಲ್ಲೂ ಹೊಳೆವ ವಜ್ರದ ಹಾರ
'ಮನೆಯೆ ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರುವು'
ಕಣ್ಕೋರೈಸೆ ಗೆಲುವಿನ ಬೆಳಕು, ಸಿಗಲಿ ಲಕ್ಷ ಹಾರ
ಸಂತಸದ ಸಿರಿಮೊಗ್ಗು ಅರಳಿ ಹೂವಾದಾಗ
ಮನತುಂಬ ನೆನಕೆ ಬಾಯಿ ತುಂಬಾ ಹಾರೈಕೆ.
ವೃಂದ